ಮಾರವರ್ಮ ಕುಲಶೇಖರ ಪಾಂಡ್ಯ
1261-1310. ಮಧುರೆಯ ಪಾಂಡ್ಯವಂಶದ ಕೊನೆಯ ಶ್ರೇಷ್ಠ ದೊರೆ. ಎರಡನೆಯ ಮಾರವರ್ಮ ಸುಂದರ ಪಾಂಡ್ಯನ (1238-51) ಉತ್ತರಾಧಿಕಾರಿಯಾದ ಈತ ಚೇರದೊರೆ ಉದಯ ಮಾರ್ತಾಂಡ, ಕಣ್ಣಾನೂರಿನಲ್ಲಿ ಆಳುತ್ತಿದ್ದ ಹೊಯ್ಸಳ ರಾಮನಾಥ ಮತ್ತು ಚೋಳ ಮೂರನೆಯ ರಾಜೇಂದ್ರ ಇವರನ್ನೆಲ್ಲ ಸೋಲಿಸಿ ಸಾಮ್ರಾಜ್ಯ ಕಟ್ಟಿದ. ಇವನ ಕಾಲದಲ್ಲಿ ಚೋಳರಾಜ್ಯ ಪಾಂಡ್ಯರ ಅಧೀನವಾಯಿತು (1279). ಮಾರವರ್ಮನ ಸೇನೆ ಸಿಂಹಳದ ಮೇಲೆ ದಂಡೆತ್ತಿ ಹೋಗಿ ಅಲ್ಲಿದ್ದ ಬುದ್ಧನ ಸ್ಮಾರಕ ದಂತವನ್ನು ಕಸಿದು ತಂದಿತು (1284). ಮುಂದೆ ಸಿಂಹಳದ ದೊರೆ ಮೂರನೆಯ ಪರಾಕ್ರಮಬಾಹು ಮಾರವರ್ಮನಿಗೆ ಕಪ್ಪವಿತ್ತು ಬುದ್ಧದಂತವನ್ನು ಮರಳಿಪಡೆದ (1302). ಇಟಾಲಿಯನ್ ಪ್ರವಾಸಿ ಮಾರ್ಕೊಪೋಲೋ ಇವನ ರಾಜ್ಯವನ್ನು ಸಂದರ್ಶಿಸಿದ (1293). ನಂಬಿ ಅಹಚ್ಪೋರುಳ್ ಎಂಬ ತಮಿಳು ವ್ಯಾಕರಣದ ಲೇಖಕ ಕವಿರಾಜನಂಬಿ ಹಾಗೂ ತಂಜೈವಾಣಮ್ ಕೋವೈ ಎಂಬ ತಮಿಳು ಕಾವ್ಯದ ಕರ್ತೃ ಪೊಯ್ಯಾಮೋಳಿ ಇವರು ಇವನ ಆಶ್ರಿತರಾಗಿದ್ದರು. ಮಾರವರ್ಮನ ಮಕ್ಕಳಾದ ಜಟಾವರ್ಮ ವೀರಪಾಂಡ್ಯ ಮತ್ತು ಜಟಾವರ್ಮ ಸುಂದರಪಾಂಡ್ಯರು ಕೊನೆಯ ದಿನಗಳಲ್ಲಿ ಪಟ್ಟಕ್ಕಾಗಿ ಹೋರಾಡಿದರು. ಸುಂದರಪಾಂಡ್ಯ 1310ರಲ್ಲಿ ತಂದೆಯನ್ನು ಕೊಂದ. ಈ ಅಂತರ್ಯುದ್ಧವೇ ಪಾಂಡ್ಯರ ಅವಸಾನಕ್ಕೆ ಕಾರಣವಾಯಿತು.	
				(ಎಸ್.ಎನ್.ಕೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ